ಕರ್ನಾಟಕ ಜೈಲುಗಳ ಸುಧಾರಣೆ : ಡಿಜಿಪಿ ಅಲೋಕ್ ಕುಮಾರ ಮುಂದಿರುವ ಸವಾಲುಗಳು...
ರಾಜ್ಯದ ಜೈಲುಗಳಲ್ಲಿ ನಡೆಯುವ ಅಕ್ರಮಗಳು, ಹೊಡೆದಾಟ, ಗಾಂಜಾ, ಅಫೀಮು, ಸಾರಾಯಿಗಳ ಸರಬರಾಜು ಮುಂತಾದವುಗಳಿ0ದ ಸದಾ ಸುದ್ದಿಯಿಂದ ಕುಖ್ಯಾತಿ ಪಡೆದಿದ್ದವು. ಒಂದು ಕಾಲದಲ್ಲಿ ಕರ್ನಾಟಕದ ಜೈಲುಗಳೆಂದರೆ ಕೈದಿಗಳು ಹೆದರುತ್ತಿದ್ದರು. ಅನೇಕ ಭಯೋತ್ಪಾದಕರನ್ನೂ ಸುರಕ್ಷತೆ ದೃಷ್ಟಿಯಿಂದ ಇಲ್ಲಿ ತಂದಿಡುತ್ತಿದ್ದರು. ಇದೀಗ ನಡೆಯುತ್ತಿರುವ ಅವ್ಯವಹಾರಗಳಿಂದ ವಿಶ್ವಾಸ ಕಳೆದುಕೊಂಡ ಜೈಲುಗಳ ಸುಧಾರಣೆಗೆ ಹೊಸ ಮೇಲಧಿಕಾರಿ ಅಂದರೆ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ ಅವರನ್ನು ನೇಮಕ ಮಾಡಲಾಗಿದೆ. ಅವರ ನೇಮಕದಿಂದ ಇನ್ನು ಮುಂದಾದರೂ ಸುಧಾರಣೆ ಕಾಣಬಹುದೇ? ಹೌದು, ಅಲೋಕ್ ಕುಮಾರ ಅವರು ಅದಿಕಾರ ವಹಿಸಿಕೊಳ್ಳುತ್ತಲೇ ಹೀಗೊಂದು ಆಶಾಭಾವನೆ ಮೂಡುತ್ತಿದೆ.
ಕೆಲಸ ಮಾಡದಿದ್ದರೆ ನಾನು ಸುಮ್ಮನೇ ಕೂಡುವುದಿಲ್ಲ. ನನಗೆ ಕೆಲಸ ಮಾಡುವವರು ಬೇಕು ಎಂಬ ಖಡಕ್ ಎಚ್ಚರಿಕೆ ಸಂದೇಶವನ್ನು ರಾಜ್ಯದ ಎಲ್ಲ ಜೈಲು ಅಧಿಕಾರಿಗಳಿಗೆ ರವಾನಿಸಿ, ಕೈದಿಗಳು ಯಾರು ನಿಯಮದಂತೆ ನಡೆದುಕೊಳ್ಳುವದಿಲ್ಲವೋ ಅವರಿಗೆ ಇದು ಜೈಲು, ನಿಮ್ಮ ಮಾವನ ಮನೆಯಲ್ಲವೆಂದು ತಿಳಿಸಿ ಎಂದು ಮೊದಲ ದನವೇ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದ್ದಾರೆ. ತಮ್ಮ ಸೇವೆಯಲ್ಲಿ ಮೊದಲಿನಿಂದಲೂ ಅತ್ಯಂತ ದಕ್ಷತೆ ನಿಷ್ಠುರತನಕ್ಕೆ ಹೆಸರಾಗಿರುವ ಬಿಹಾರ ಮೂಲದವರಾಗಿರುವ ಅಲೋಕ್ ಕುಮಾರ ಅವರು, ೧೯೯೪ ರ ಬ್ಯಾಚೀನ ಕರ್ನಾಟಕ ಕೇಡರ್ ಅಧಿಕಾರಿಯಾಗಿ ಅಧಿಕಾರಿಯಾಗಿ ಸೇರ್ಪಡೆಯದಂದಿನಿAದಲೂ ತಮ್ಮ ಅಧೀನ ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳುವುದರಲ್ಲಿ ಅತ್ಯಂತ ಖಡಕ್ ಅಧಿಕಾರಿ ಎಂದೇ ಹೆಸರು ಪಡೆದಿರುವ ಅವರು, ಸರಕಾರ ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ರಾಜ್ಯ ಸರಕಾರ ತಮಗೆ ನ್ಯಾಯಯುತವಾಗಿ ಸಿಗಬೇಕಾಗಿದ್ದ ಬಡ್ತಿಯನ್ನು ಹೋರಾಟದ ಮೂಲಕ ಪಡೆದುಕೊಂಡಿರುವ ಅವರಿಗೆ ಸರ್ಕಾರ ಕಾರಾಗೃಹ ಡಿಜಿಪಿಯಾಗಿ ನೇಮಿಸಿದೆ.
ಪೊಲೀಸ್ ಇಲಾಖೆಯಲ್ಲಿ ಕೆಲಸದಲ್ಲಿ ಶಿಸ್ತು, ಸಂಯಮ ಬಹಳೇ ಮುಖ್ಯವಾಗಿರುತ್ತದೆ. ಅದನ್ನು ತಮ್ಮ ಜೀವನದಲ್ಲಿಯೂ ರೂಢಿಸಿಕೊಂಡಿರುವ ಅವರು, ಹೊಸ ಜವಾಬ್ದಾರಿಯನ್ನು ನಿಸ್ಪೃಹವಾಗಿ ನಿಭಾಯಿಸಬಲ್ಲರು ಎಂಬ ವಿಶ್ವಾಸ ರಾಜ್ಯದ ಜನತೆಯಲ್ಲಿದೆ.
ಹಿಂದೆ ಅವರು ಕಲಬುರಗಿ ಎಸ್ಪಿಯಾಗಿ ಮತ್ತು ಡಿಐಜಿಯಾಗಿ ಕಾರ್ಯ ನಿರ್ವಹಿಸಿದ ರೀತಿಯಿಂದಾಗಿ ಇಂದಿಗೂ ಕಲಬುರಗಿ ಜಿಲ್ಲೆಯ ಜನಕ್ಕೆ ಅಚ್ಚುಮೆಚ್ಚಿನ ಅಧಿಕಾರಿಯಾಗಿದ್ದಾರೆ.
ಕೆಟ್ಟ ಘಳಿಗೆ : ಶಿಸ್ತಿನ ಅಧಿಕಾರಿ ಅಲೋಕ್ ಕುಮಾರ್ ಅವರ ಜೀವನದಲ್ಲಿ ಕೆಟ್ಟ ಘಟನೆಯೊಂದು ೨೦೧೯ರಲ್ಲಿ ನಡೆಯಿತು. ಆಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಮೇಲೆ ಫೋನ್ ಕದ್ದಾಲಿಕೆ ಆರೋಪ ಕೇಳಿ ಬಂದಿತು. ಈ ಪ್ರಕರಣದ ಇಲಾಖಾ ವಿಚಾರಣೆ ನಡೆಸಿದ ರಾಜ್ಯ ಸರಕಾರ ನಂತರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತ್ತು. ಅನಂತರ ಸಿಬಿಐ ತನಿಖೆಯಲ್ಲಿ ಕದ್ದಾಲಿಕೆ ಪ್ರಕರಣದಲ್ಲಿ ಅಲೋಕ್ ಕುಮಾರ್ ಪಾತ್ರ ಇಲ್ಲವೆಂದು ಬೀ ರಿಪೋರ್ಟ್ ಹಾಕಿತ್ತು. ಕದ್ದಾಲಿಕೆ ಪ್ರಕರಣದ ನಂತರ ಈ ಹಿರಿಯ ಐಪಿಎಸ್ ಅಧಿಕಾರಿಗೆ ಮಾನಸಿಕವಾಗಿ ಸಾಕಷ್ಟು ಕಿರಿ ಕಿರಿಯಾಗಿದ್ದುಂಟು. ತಮಗಾಗುತ್ತಿರುವ ಕಿರಿಕಿರಿಯನ್ನು ಅವರು ಸೌಮ್ಯ ಮತ್ತು ಶಾಂತ ರೀತಿಯಿಂದಲೇ ಎದುರಿಸಿದರು.
ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಅಲೋಕ್ ಕುಮಾರ್ ಪಾತ್ರ ಇಲ್ಲವೆಂದು ಸಿಬಿಐ ಬಿ ರಿಪೋರ್ಟ್ ಹಾಕಿದ ನಂತರ ಈಗಿನ ರಾಜ್ಯ ಸರಕಾರ ಇದೇ ವರ್ಷ ಇವರ ವಿರುದ್ಧ ಮತ್ತೆ ಇಲಾಖಾ ವಿಚಾರಣೆಗೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಅವರು ಕೇಂದ್ರ ಆಡಳಿತಾತ್ಮಕ ಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮಂಡಳಿಯ ನ್ಯಾಯಾಧೀಶರಾದ ಬಿ.ಕೆ. ಶ್ರೀವಾತ್ಸವ್ ಮತ್ತು ಸಂತೋಷ್ ಮೆಹ್ರಾ ಅವರುಗಳು ವಿಭಿನ್ನ ತೀರ್ಪು ನೀಡಿದ್ದರು. ನಂತರ ಪ್ರಕರಣವು ಮೂರನೇ ನ್ಯಾಯಾಧೀಶರ ಮುಂದೆ ಬಂದಾಗ, ಅವರು ಇವರ ಪರವಾಗಿ ತೀರ್ಪು ನೀಡಿ ಅಲೋಕಕುಮಾರ ಅವರಿಗೆ ಇಲಾಖೆಯ ಎಲ್ಲ ಸೌಲಭ್ಯಗಳನ್ನು ನೀಡಬೇಕು ಎಂದು ಆದೇಶ ಹೊರಡಿಸಿದ್ದರು. ಈ ಆದೇಶ ಪ್ರಶ್ನಿಸಿ ಸರಕಾರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ನಲ್ಲಿಯೂ ಅಲೋಕ್ ಕುಮಾರ್ ಅವರ ಪರವಾಗಿ ಆದೇಶ ಬಂದಿತು. ಈ ಎಲ್ಲ ಹಿನ್ನೆಲೆಯಲ್ಲಿ ಈಗ ಸರಕಾರ ಅವರಿಗೆ ಅನಿವಾರ್ಯವಾಗಿ ಮುಂಬಡ್ತಿ ನೀಡಿ ಬಂಧೀಖಾನೆ ಇಲಾಖೆಯ ಡಿಜಿಪಿಯನ್ನಾಗಿ ಮಾಡಿದೆ. ಇದೊಂದು ರೀತಿಯಲ್ಲಿ ಅವರಿಗೆ ಶಿಕ್ಷೆ ರೂಪದಲ್ಲಿ ನೇಮಕ ಮಾಡಿದ್ದರೂ, ಕಟ್ಟುನಿಟ್ಟಿನಿಂದ ನಿಷ್ಠೆಯಿಂದಿದ್ದವರಿಗೆ ಕೆಲಸ ಯಾವುದಾದರೇನು? ಅವರು ಅಲ್ಲೂ ಜನರ ನಿರೀಕ್ಷೆ ಹುಸಿ ಮಾಡುವದಿಲ್ಲ ಎಂಬ ವಿಶ್ವಾಸ.
ಜೈಲುಗಳ ಸುಧಾರಣೆ ಎಂದ ತಕ್ಷಣವೇ ನಮಗೆ ನೆನಪಾಗುವುದು ಐಪಿಎಸ್ ನಿವೃತ್ತ ಅಧಿಕಾರಿ ಕಿರಣ್ ಬೇಡಿಯವರು. ಅವರು ತಮ್ಮ ಕಾಲದಲ್ಲಿ ತಿಹಾರ್ ಜೈಲು ಸೇರಿದಂತೆ ಅನೇಕ ಜೈಲುಗಳನ್ನು ಎಲ್ಲ ರೀತಿಯಿಂದ ಸುಧಾರಿಸಿದರು. ಅಷ್ಟೇ ಅಲ್ಲದೆ ಜೈಲಿನಲ್ಲಿರುವ ಖೈದಿಗಳ ಮನ: ಪರಿವರ್ತನೆಯನ್ನೂ ಮಾಡಿದ್ದರು. ಹೀಗಾಗಿ ಇಂದಿಗೂ ಕಿರಣ್ ಬೇಡಿಯವರ ಹೆಸರು ಶಾಶ್ವತವಾಗಿ ಉಳಿದಿದೆ. ಒಬ್ಬ ಐಪಿಎಸ್ ನಿಷ್ಠಾವಂತ ಅಧಿಕಾರಿ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಅವರು ಇಂದಿಗೂ ಸಾಕ್ಷಿಯಾಗಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ ಅವರಿಂದಲೂ ಜನತೆ ಇಂಥದೇ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಕರ್ನಾಟಕದಲ್ಲಿರುವ ಜೈಲುಗಳಲ್ಲಿ ಮೊದಲಿನಿಂದಲೂ ಆಗ್ಗಾಗ್ಗೆ ಅಚಾತುರ್ಯ ಘಟನೆಗಳು ನಡೆಯುತ್ತಲೇ ಬಂದಿವೆ. ಖೈದಿಗಳ ಮಧ್ಯೆ ಹೊಡೆದಾಟ, ಜೈಲು ಸಿಬ್ಬಂದಿಗೆ ಬೆದರಿಕೆ ಹೀಗೆ ಕೃತ್ಯಗಳು ನಡೆಯುತ್ತಲೇ ಇವೆ. ಆದರೆ ಕಳೆದ ಒಂದು ವರ್ಷದಿಂದ ಅಚಾತುರ್ಯ ಘಟನೆಗಳು ಮಿತಿಮೀರಿ ನಡೆಯುತ್ತಿರುವುದರಿಂದ ಜೈಲು ಸಿಬ್ಬಂದಿ ಮತ್ತು ಅನೇಕ ಖೈದಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಒಂದು ರೀತಿಯಲ್ಲಿ ಯಾರಿಗೂ ಭದ್ರತೆ ಇಲ್ಲದಂತಾಗಿದೆ.
ಈಗ ಜೈಲಿನಲ್ಲಿರುವ ಸಿನೆಮಾ ನಟ ದರ್ಶನ್ ಅವರು ರೌಡಿಶೀಟರ್ ಜೊತೆ ಕುಳಿತುಕೊಂಡು ಮಾತುಕತೆ ನಡೆಸಿದ್ದು, ಮೊಬೈಲ್ ನಲ್ಲಿ ಮಾತನಾಡಿದ್ದು, ಸಿಗರೇಟ್ ಸೆದಿದ್ದು, ಹೀಗೆ ಹಲವು ಘಟನೆಗಳು ನಡೆದಿದ್ದರಿಂದ ಎಚ್ಚೆತ್ತುಗೊಂಡಿದ್ದ ಜೈಲು ಅಧಿಕಾರಿಗಳು ದರ್ಶನ್ ಅವರನ್ನು ಬೇರೆ ಜೈಲಿಗೆ ಶಿಪ್ಟ್ ಮಾಡುವಂತೆ ಮನವಿ ಮಾಡಿಕೊಂಡಿದ್ದರಿAದ ಬಳ್ಳಾರಿ ಜೈಲಿಗೆ ಶಿಪ್ಟ ಮಾಡಲಾಗಿತ್ತು. ಅಲ್ಲಿದ್ದಾಗಲೇ ಅವರು ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದರು. ಆದರೆ ರಾಜ್ಯ ಸರಕಾರ ಇವರು ಮತ್ತು ಇವರ ಸಂಗಡಿಗರ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಸುಪ್ರೀಂಕೋರ್ಟ್ ನಲ್ಲಿ ದರ್ಶನ್ ಮತ್ತು ಅವರ ಸಂಗಡ ಇದ್ದವರ ಜಾಮೀನು ರದ್ದು ಪಡಿಸಿದ್ದರಿಂದ ಅವರನ್ನು ಮತ್ತೇ ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿತ್ತು. ಈಗ ಅವರು ಪರಪ್ಪನ ಅಗ್ರಹಾರದಲ್ಲಿಯೇ ಕೆಲವು ಕಟ್ಟು ನಿಟ್ಟಿನ ಸೂಚನೆ ಮೇರೆಗೆ ಇದ್ದಾರೆ.
ತೀರ ಇತ್ತೀಚೆಗೆ ಇದೇ ಪರಪ್ಪನ ಅಗ್ರಹಾರದಲ್ಲಿರುವ ಭಯೋತ್ಪಾದಕನೊಬ್ಬ ಮತ್ತು ವಿಕೃತ ಕಾಮುಕ ಉಮೇಶ ರೆಡ್ಡಿಯವರು ಮೊಬೈಲ್‌ನಲ್ಲಿ ಮಾತನಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೇ ಬಂಧೀಖಾನೆಯಲ್ಲಿಯೇ ಖೈದಿಗಳ ಗುಂಪೊAದು ಕುಡಿದು ಮೋಜು ಮಸ್ತಿ ಮಾಡಿರುವ ವಿಡಿಯೋಗಳು ಹರಿದಾಡಿದವು. ಇನ್ನು ಕೆಲ ಖೈದಿಗಳಿಗೆ ಜೈಲು ಸಿಬ್ಬಂದಿಯೇ ಮಾದಕ ವಸ್ತುಗಳನ್ನು ತಂದುಕೊಟ್ಟಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಎರಡು ದಿನಗಳ ಹಿಂದಷ್ಟೇ ಖೈದಿಗಳು ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಪ್ರಕರಣವು ಸುದ್ದಿಯಾಗಿದೆ. ಹೀಗೆ ಅನೇಕ ಪ್ರಕರಣಗಳು ಅವ್ಯಾಹತವಾಗಿ ನಡೆದುಕೊಂಡು ಬರುತ್ತಿವೆ. ಅನೇಕ ಜೈಲುಗಳಲ್ಲಿ ಕನಿಷ್ಠ ಸೌಲಭ್ಯಗಳ ಕೊರತೆಯೂ ಎದ್ದು ಕಾಣುತ್ತಿದೆ. ಇವೆಲ್ಲ ಮೂಲಭೂತ ಸಮಸ್ಯೆಗಳೊಂದಿಗೆ ಕೈದಿಗಳ ನಿಯಂತ್ರಣ ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿAದ ಕೆಲಸ ಮಾಡುವ ಪದ್ಧತಿ ಬದಲಾವಣೆ ಈ ಎಲ್ಲವನ್ನೂ ಅಲೋಕ್ ಕುಮಾರ್ ಅವರು ಸುಧಾರಿಸಬೇಕಾಗಿದೆ. ಈ ಹಿರಿಯ ಅಧಿಕಾರಿ ಜೈಲುಗಳನ್ನೂ ಸುಧಾರಿಸುತ್ತಾರೆ ಎಂಬ ಭರವಸೆಯೂ ಇದೆ.
ಕೆಲ ವಿಷಯಗಳಲ್ಲಿ ಕಟ್ಟುನಿಟ್ಟಿನ ಕ್ರಮವೂ ಅಗತ್ಯವಾಗಿದೆ. ಖೈದಿಗಳ ಜೊತೆ ಕೈಗೂಡಿಸಿದ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಅಗತ್ಯವಾಗಿದೆ. ಈ ಎಲ್ಲವನ್ನೂ ಅಲೋಕ್ ಕುಮಾರ್ ಮಾಡುತ್ತಾರೆ ಎಂಬ ನಂಬಿಕೆಯೂ ಇದೆ.
-ವಾದಿರಾಜ ವ್ಯಾಸಮುದ್ರ ಕಲಬುರಗಿ
No comments:
Post a Comment