ಕಾದಂಬರಿಗಾರ್ತಿ ಎ.ಪಿ. ಮಾಲತಿ ಬರೆದಿರುವ "ಅಂಜನ" ಕಿರು ಕಾದಂಬರಿಯನ್ನು ಮೈಸೂರು ಗೀತಾ ಬುಕ್ ಹೌಸ್ ಪ್ರಕಟಿಸಿದೆ. ಈ ಹಿಂದೆ ಎ.ಪಿ.ಮಾಲತಿ ಅವರು ಬರೆದಿರುವ "ಸುಖದ ಹಾದಿ" ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಗ್ರಾಮೀಣ ಮಹಿಳೆಯರು, ಹಳ್ಳಿಗೆ ಬಂದ ಎಳೆಯರು, ದೇವ, ಸರಿದ ತೆರೆ, ಅತೃಪ್ತಿ, ಬದಲಾಗದವರು, ಅರ್ಧಾಂಗಿ, ಹೊಸಹೆಜ್ಜೆ, ಮಿನುಗದ ಚುಕ್ಕೆ, ಪುನರ್ಮಿಲನ, ತಿರುಗಿದ ಚಕ್ರ, ಮಂದಾರ ಹೀಗೆ ಇನ್ನೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಅಂಜನ ಈ ಕಿರು ಕಾದಂಬರಿಯಲ್ಲಿ ಹಿರಿದಾದ ಬದುಕಿನ ಘಟನೆಯನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಎ.ಪಿ. ಮಾಲತಿಯವರು. 'ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಹೋರಾಟ ಸಹಜವಾದುದಾಗಿದೆ. ಕುಟುಂಬದಲ್ಲಿ ಮಹಿಳೆಯ ಪಾತ್ರ ಪ್ರಮುಖವಾದುದು. ನಡೆಯುವ ಬದುಕಿನ ದಾರಿಯಲ್ಲಿ ಬರುವ ತೊಡಕುಗಳನ್ನು ನಿಭಾಯಿಸುವ ವಿಧಾನದಲ್ಲಿ ವಹಿಸಬೇಕಾದ ಪಾತ್ರದಲ್ಲಿ ಹೆಣ್ಣು ಪಡುವ ಪಡಿಪಾಟಲು, ತನಗಾಗಿಯೇ ಬಂದ ಬದುಕನ್ನು ಸರಿಯಾಗಿಸಿಕೊಳ್ಳುವಲ್ಲಿ ಹೆಣ್ಣು ತೋರುವ ಹೋರಾಟ, ದಿಟ್ಟ ಹೆಜ್ಜೆಯನ್ನು ಈ ಕಾದಂಬರಿ ನಮಗೆ ಪರಿಚಯಿಸುತ್ತದೆ.
ಒಬ್ಬೊಬ್ಬರ ಬದುಕಿನಲ್ಲಿ ಒಂದೊಂದು ಬಗೆಯ ಸಂಕಟಗಳು, ತಲ್ಲಣಗಳು ನೋವುಗಳು ಬರುವುದಂತೂ ಸಹಜವಾಗಿದೆ. ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು, ಕೆಲವು ಸಮಸ್ಯೆಗಳನ್ನು ಬಿಡಿಸಿಕೊಳ್ಳಲಾಗದೆ ಒದ್ದಾಡುವುದು ಇದೆ. ಕುಟುಂಬದೊಳಗಿನ ಸಂಕಟಗಳನ್ನು ಪರಿಹರಿಸಿಕೊಳ್ಳುವ ವಿಧಾನದಲ್ಲಿ ಹಿರಿಯರ ಪಾತ್ರವೂ ಕೂಡ ಪ್ರಮುಖವಾಗಿರುತ್ತದೆ. ಹಿರಿಯರು ತೋರುವ ಅಡ್ಡ ದಾರಿಯಲ್ಲಿ ಮುಂದುವರಿಯಲಾಗದೆ ಹೋದಾಗ, ನೇರ ದಾರಿಯಲ್ಲಿ ಸಾಗುವುದಕ್ಕೆ ಬರುವ ಅಡ್ಡಿ ಆತಂಕಗಳಿಗೆ ಹೆಣ್ಣು ಪಡುವ ಸಂಕಟಗಳಿಂದ ಹೊರ ಬರುವ ಅಂಜನಳ ಪಾತ್ರ ನಿಜಕ್ಕೂ ಮನ ಮಿಡಿಯುತ್ತದೆ.
ಹಿರಿಯರು ತೆಗೆದುಕೊಳ್ಳುವ ನಿರ್ಧಾರದಲ್ಲಿ ಒಂದು ಸುಳ್ಳು ಬದುಕನ್ನೇ ಕೊಲ್ಲುತ್ತದೆ. ಸುಭದ್ರ ಮತ್ತು ವೆಂಕಣ್ಣ ತನ್ನ ಮಗ ನಂಜುಂಡನ ಅಸಹಾಯಕತೆ ಗೊತ್ತಿದ್ದರೂ ವಿಶಾಲಾಕ್ಷಿ ಮತ್ತು ಶಿವರಾಮನ ಮಗಳಾದ ಅಂಜನಳನ್ನು ನಂಜುಂಡನಿಗೆ ಮದುವೆ ಮಾಡಿಕೊಂಡಿದ್ದು ಎಷ್ಟು ಸರಿ? ಇದರಿಂದ ತಮ್ಮ ವಂಶ ಬೆಳೆಯಬೇಕೆಂದು ನಿರೀಕ್ಷೆ ಮಾಡಿದ್ದು ಎಷ್ಟು ಸರಿ? ಪುರುಷತ್ವವೇ ಇಲ್ಲದ ನಂಜುಂಡನಿಂದ ಅಂಜನ ಗರ್ಭಧರಿಸುವುದಾದರೂ ಸಾಧ್ಯವೇ? ಹೀಗಿರುವಾಗ ಆಕೆ ತನ್ನ ಪಾಲಿಗೆ ದೊರಕಿದ ಬದುಕನ್ನು ಪ್ರೀತಿಸುತ್ತಾ ಗಂಡ ಹೆಂಡತಿಯಾಗಿ ಬದುಕಬೇಕಾದ ಸಂಬಂಧ ಸ್ನೇಹಿತರಂತೆ ಬದುಕುವಂತಾದಾಗ ಅಂಜನ ಬುದ್ಧಿವಂತಳಾಗಿ ಈ ಬದುಕಿಗೆ ಒಗ್ಗಿಕೊಂಡದ್ದು, ತನ್ನ ಗಂಡನನ್ನು ಆರೈಕೆ, ಪ್ರೀತಿಯಲ್ಲಿ ನೋಡಿಕೊಂಡು ಬರುತ್ತಿರುವ ಅಂಜನಳಿಗೆ ತಾನು ಮಾಡಿದ ಮೋಸದ ಬಗ್ಗೆ ತಾನೇ ಪಶ್ಚಾತಾಪ ಪಡುತ್ತಾನೆ ನಂಜುಂಡ. ಹೀಗೆಯೇ ಬದುಕು ಸಾಗಿಸಿ ಬಿಡಬೇಕು ಎನ್ನುವ ನಿರ್ಧಾರಕ್ಕೆ ಬಂದ ಅಂಜನಾಳಿಗೆ ಹಿರಿಯರಾದ ಅತ್ತೆ ಸುಭದ್ರ ಮತ್ತು ಮಾವ ವೆಂಕಣ್ಣ ತೆಗೆದುಕೊಳ್ಳುವ ನಿರ್ಧಾರದಲ್ಲಿ ಅಂಜನ ನಿಜಕ್ಕೂ ಬೆಚ್ಚುತ್ತಾಳೆ.
ಅತ್ತೆ ಸುಭದ್ರ ತನ್ನ ತಮ್ಮನಾದ ಪ್ರಕಾಶನನ್ನು ಪದೇ ಪದೇ ಮನೆಗೆ ಕರೆಸಿಕೊಂಡು ತನ್ನ ಸೊಸೆ ಅಂಜನಳ ಜೊತೆಗೆ ಸೇರುವ ಬಯಕೆಯನ್ನು ವ್ಯಕ್ತಪಡಿಸಿದಾಗ, ಅಂಜನ ಸಿಡಿದೇಳುತ್ತಾಳೆ; ತನ್ನ ಪತಿಗಾಗಿ ತನ್ನ ಶೀಲ ಮಾತ್ರ ಸೀಮಿತ ಎಂದು ಕೂಗಾಡುತ್ತಾಳೆ. ಪರಪುರುಷನೊಡನೆ ಸೇರಿ ಗರ್ಭ ಧರಿಸಲು ಇಷ್ಟಪಡದ ಅಂಜನ, ಅದು ನಂಜುಂಡನ ಮಗು ಹೇಗಾಗುತ್ತೆ? ನಿಮ್ಮ ವಂಶದ ಕುಡಿ ಆಗಲು ಸಾಧ್ಯವೇ? ಎಂದು ಪ್ರಶ್ನಿಸುತ್ತಾಳೆ ಈ ಹಿಂದೆ ದತ್ತು ಮಗುವನ್ನು ತೆಗೆದುಕೊಂಡು ಸಾಕುವ ಬಗ್ಗೆ ಪ್ರಸ್ತಾಪಿಸಿದ ಅಂಜನಾಳಿಗೆ ಅತ್ತೆ ಅದು ನಮ್ಮ ವಂಶದ್ದು ಹೇಗಾಗುತ್ತದೆ? ಎನ್ನುವ ಮಾತಿಗೆ ಅಂಜನ ಕೊಟ್ಟ ಈ ಮಾತುಗಳು ಪಾಟೀಸವಾಲಿನಂತೆ ಅವಳ ಎದೆಗೆ ಹಿರಿಯುತ್ತವೆ.
ಅದೊಂದು ದಿನ ಪ್ರಕಾಶನ ತೆಕ್ಕೆಯಿಂದ ತಪ್ಪಿಸಿಕೊಂಡ ನಂತರ, ತನ್ನ ಗಂಡ ನಂಜುಂಡನೇ ಅಂಜನಳನ್ನು ಆ ಕೋಪದಿಂದ ರಕ್ಷಿಸಿ, ಹೊರಗೆ ಹೋಗುವಂತೆ ಮಾಡುತ್ತಾನೆ. ಅಂಜನ ತನ್ನ ಸ್ನೇಹಿತೆ ದೇವಕಿಯ ತಮ್ಮನಾದ ಹರಿಶ್ಚಂದ್ರನ ಜೊತೆ ಮಾರುವೇಷದಲ್ಲಿ ತನ್ನ ತವರಿಗೆ ಸೇರಿಕೊಳ್ಳುತ್ತಾಳೆ. ಹರಿಶ್ಚಂದ್ರ ಅಲ್ಲಿಂದ ಅಲಹಾಬಾದಿಗೆ ಹೊರಟು ಹೋಗುತ್ತಾನೆ.
ಆದರೆ ಗಾಬರಿಯಾದ ಅಂಜನಳ ತಂದೆ, ತಾಯಿ, ಸಹೋದರರು "ಕೊಟ್ಟ ಹೆಣ್ಣು ಕುಲಕ್ಕೆ ಹೊರಗೂ" ಎನ್ನುವಂತೆ ಮಾತನಾಡಲು ಪ್ರಾರಂಭಿಸಿದಾಗ ಅಂಜನ ಆಘಾತಕ್ಕೆ ಒಳಗಾಗುತ್ತಾಳೆ. ನಿಜ ಸ್ಥಿತಿ ತಿಳಿದು ಕೆಲ ದಿನಗಳು ಕಳೆದು ಹೋಗುತ್ತವೆ. ಅತ್ತ ಬಿಟ್ಟು ನಂಜುಂಡನಿಗೆ ಮರು ಮದುವೆಯಾಗಿ ಒಂದು ಗಂಡು ಮಗು ಎನ್ನುವ ಸುದ್ದಿ ಅಂಜನಳಿಗೆ ತಲುಪುತ್ತದೆ. ಈ ಸಂದರ್ಭದಲ್ಲಿ ಅಂಜನಾ "ಹೂವು ಕಾಣದ ಮರದಲ್ಲಿ ಕಾಯಿ ಸಾಧ್ಯವೇ"? ಎಂದು ನಕ್ಕು ಸುಮ್ಮನಾಗುತ್ತಾಳೆ. ಸುಭದ್ರಳ ಹಠದಲ್ಲಿ ಹೊಸದಾಗಿ ಮದುವೆಯಾದ ನಂಜುಂಡನ ಹೆಂಡತಿಯು ಒಂದು ಹೆಣ್ಣಲ್ಲವೇ ಎಂದುಕೊಳ್ಳುತ್ತಾಳೆ.
ಇತ್ತ ತನ್ನ ಸ್ನೇಹಿತೆ ದೇವಕಿಯ ತಮ್ಮ ಹರಿಶ್ಚಂದ್ರನ ಜೊತೆ ಅಂಜನ ಮರುಮದುವೆಯಾಗುತ್ತಾಳೆ. ಅಂಜನಳು ಈಗ ಗರ್ಭಿಣಿಯಾಗಿದ್ದಾಳೆ ಎಂದು ಕೊನೆಯಾಗುವ ಈ ಕಾದಂಬರಿಯಲ್ಲಿ ನೇರ ದಾರಿಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಹೋರಾಡುವ ಸಂದರ್ಭದಲ್ಲಿ ಎದುರಿಸುವ ಸಂಕಷ್ಟಗಳು ಮತ್ತು ಅಡ್ಡ ದಾರಿಯ ಬದುಕನ್ನು ನೇರ ದಾರಿ ಎಂದು ತಿಳಿದು ಬದುಕುವ ಇವತ್ತಿನ ಅನೇಕ ಘಟನೆಗಳು ನಮ್ಮ ಮುಂದೆ ಇರುವುದನ್ನು ಸಮಾಜದಲ್ಲಿ ನಾವು ಕಾಣುತ್ತೇವೆ.
ಹಿಂದೆ ಸಾಮ್ರಾಜ್ಯಗಳನ್ನು ಉಳಿಸಿಕೊಳ್ಳಲು ರಾಜನು ಅಸಮರ್ಥನಾದಾಗ ಋಷಿಮುನಿಗಳು ವರದಿಂದಲೋ, ಶಾಪದಿಂದಲೋ ಪುತ್ರ ಸಂತಾನವನ್ನು ಪಡೆಯುವ ಕತೆಗಳನ್ನು ನಾವು ಓದಿದ್ದೇವೆ. ಆದರೆ ನೈಜವಾಗಿ ಒಂದು ಹೆಣ್ಣು ತನ್ನ ಪತಿಯಿಂದಲೇ ಮಕ್ಕಳ ಸಂತಾನ ಪಡೆದಾಗಲೇ ಅದಕ್ಕೊಂದು ಪವಿತ್ರತೆ ಬರುತ್ತದೆ ಎಂದು ತಿಳಿದುಕೊಳ್ಳುತ್ತಾಳೆ. ಇದನ್ನು ಬಯಸುವ ಹೆಣ್ಣಾಗಿ ಅಂಜನ ಈ ಕಾದಂಬರಿ ಕಾಣಿಸಿಕೊಳ್ಳುತ್ತಾಳೆ. ಸಮಾಜ ಮತ್ತು ಕುಟುಂಬ ವ್ಯವಸ್ಥೆಯೊಳಗೆ ಹೆಣ್ಣು ಪಡುವ ಸಂಕಷ್ಟಗಳು ನಾವು ನೋಡುತ್ತಲೇ ಬರುತ್ತಿದ್ದೇವೆ. ಯಾವುದು ತಪ್ಪು, ಯಾವುದು ಸರಿ ಎನ್ನುವ ದ್ವಂದ್ವದಲ್ಲಿ ಪರಿಹಾರ ಹುಡುಕುತ್ತಲೇ ಇದ್ದೇವೆ ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ!
-ಉದಂತ ಶಿವಕುಮಾರ ಲೆಖಕರು, ಬೆಂಗಳೂರು-560056
No comments:
Post a Comment