ಕೇಂದ್ರಕ್ಕೆ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಸಂಸದರೊಂದಿಗೆ ಚರ್ಚಿಸಿದ್ದೇನೆ : ದೆಹಲಿಯಲ್ಲಿ ಸಿಎಂ ಹೇಳಿಕೆ
ಎಸ್ಕಾಂಗಳಿಗೆ ಸಾಲ ಷರತ್ತುಗಳನ್ನು ಕೈಬಿಡಲು ಕೇಂದ್ರಕ್ಕೆ ಮನವಿ : ಎಸ್ಕಾಂಗಳಿಗೆ ಸಾಲ ಪಡೆಯಲು ವಿಧಿಸಿರುವ ಕೆಲವು ಷರತ್ತುಗಳನ್ನು ಕೈಬಿಡುವಂತೆ ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಅವರಲ್ಲಿ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಎಸ್ಕಾಂಗಳಿಗೆ ಸಹಾಯಧನ, ಅಂತರ ಇಲಾಖಾ ಬಿಲ್ಗಳನ್ನು ಕೊಡಬೇಕೆನ್ನುವ ಷರತ್ತುಗಳನ್ನು ವಿಧಿಸಲಾಗಿದೆ. ಒಂದೇ ವರ್ಷಕ್ಕೆ ಇಷ್ಟು ಷರತ್ತುಗಳನ್ನು ಹಾಕದಿರುವಂತೆ ಮನವಿ ಮಾಡಲಾಗಿದೆ. ಅವುಗಳನ್ನು ಮನ್ನಾ ಮಾಡಿದರೆ ಎಸ್ಕಾಂಗಳಿಗೆ ಬ್ಯಾಂಕ್ನಿಂದ ಹಣ ದೊರೆಯಲಿದೆ. ಕರ್ನಾಟಕ ಪವರ್ ಜನರೇಷನ್ ಕಂಪನಿಗೆ ಈ ಮೊತ್ತವನ್ನು ಪಾವತಿಸಬಹುದು. ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕೆಲವು ಸ್ಪಷ್ಟೀಕರಣಗಳ ಅಗತ್ಯವಿದೆ ಎಂದಿದ್ದಾರೆ.
ಅಧಿಕಾರಿಗಳೊಂದಿಗಿನ ಸಭೆಯ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮದು ಅತಿ ಹೆಚ್ವು ಇಂಧನ ಸಹಾಯಧನ ನೀಡುವ ರಾಜ್ಯವಾಗಿದೆ. 15,000 ಕೋಟಿ ರೂ.ಗಳ ಸಹಾಯಧನವನ್ನು ಕರ್ನಾಟಕ ಒದಗಿಸುತ್ತದೆ. ಅದಕ್ಕೆ ಹಿಂದಿನ ವರ್ಷಗಳ ಬಾಕಿ ಮೊತ್ತವನ್ನು ನೀಡಲು ಸಮಯಾವಕಾಶದ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಇಂಧನ ಕ್ಷೇತ್ರದಲ್ಲಿ 4 % ವಿತ್ತೀಯ ಕೊರತೆಗೆ ಅನುಮತಿ ನೀಡಿದ್ದು, ಶೇ. 0.5ರಷ್ಟು ಇಂಧನ ಕ್ಷೇತ್ರಕ್ಕೆ ಮೀಸಲಿಡಲು ಸೂಚನೆ ನೀಡಿದ್ದು, ಇಂಧನ ಕ್ಷೇತ್ರದ ಸುಧಾರಣೆಗಾಗಿ ಈ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಸಚಿವರು ತಿಳಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ರೇಕುಗಳ ಸರಬರಾಜಿಗೆ ರೈಲ್ವೆ ಸಚಿವರಿಗೆ ಮನವಿ: ಕಲ್ಲಿದ್ದಲು ಸಾಗಾಣಿಕೆಗೆ ಅಗತ್ಯವಿರುವ ರೇಕುಗಳ ಸರಬರಾಜಿನ ಕುರಿತು ಚರ್ಚಿಸಲಾಗಿದೆ. ಈ ಬಗ್ಗೆ ರೈಲ್ವೆ ಮಂಡಳಿಯಲ್ಲಿ ಸಂಬಂಧಿಸಿದವರಿಗೆ ಸೂಚನೆ ನೀಡುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ರೈಲ್ವೆ ಮಂಡಳಿ ಅಧ್ಯಕ್ಷರೊಂದಿಗೆ ಮಾತನಾಡಲಿದ್ದಾರೆ ಎಂದು ಸಚಿವರು ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಕೇಂದ್ರ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದೆ. ರಸ್ತೆ ಮತ್ತು ರೈಲ್ವೆ ಯೋಜನೆಗಳಲ್ಲಿ ತೆರಿಗೆ ವಿನಾಯ್ತಿ ಹಾಗೂ ಅನುಮೋದನೆಗಳನ್ನು ನೀಡುವಲ್ಲಿ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಎಸ್ಟಿಆರ್ಆರ್ ರಸ್ತೆಗಳಿಗೆ ಜಿಎಸ್ಟಿ ವಿನಾಯ್ತಿ ನೀಡಲು ಒಪ್ಪಿಗೆ ನೀಡಲಾಗಿದೆ. ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 50:50 ಪಾಲುದಾರಿಕೆಯಲ್ಲಿ ರೈಲ್ವೆ ಯೋಜನೆಗಳು ಅನುಷ್ಠಾನಗೊಳ್ಳುತ್ತವೆ. ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರದಿಂದ ಒಂದೇ ವರ್ಷ ಸಂಪೂರ್ಣ ಹಣ ಬಿಡುಗಡೆ ಮಾಡಲಾಗುವುದಿಲ್ಲ.
ಆದ್ಯತೆ ಆಧಾರದ ಮೇಲೆ ಹಣ ಬಿಡುಗಡೆ ನಿಗದಿಪಡಿಸಿಕೊಳ್ಳಲಾಗಿದೆ. ಕೆಲವು ರೈಲ್ವೆ ಯೋಜನೆಗಳಲ್ಲಿ ಹಣ ಬಿಡುಗಡೆಯಾಗಿದ್ದರೂ ಭೂ ಸ್ವಾಧೀನದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರದಲ್ಲಿ ಮಂಜೂರಾತಿ ದೊರೆತು ಅನುದಾನ ಬಿಡುಗಡೆಯಾಗಿರುವ ಪ್ರಮುಖ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರವೂ ಆದ್ಯತೆ ಮೇರೆಗೆ ಅನುದಾನ ಬಿಡುಗಡೆ ಹಾಗೂ ಭೂ ಸ್ವಾಧೀನ ಪ್ರಕ್ರಿಯೆಯನ್ನು ಜಾರಿಗೊಳಿಸುತ್ತಿದೆ ಎಂದು ತಿಳಿಸಿದರು.
ಆರೋಗ್ಯ ಮೂಲಸೌಕರ್ಯಕ್ಕೆ ಅನುದಾನ : ಆರೋಗ್ಯ ಸಚಿವರನ್ನು ಭೇಟಿಯಾಗಿ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಮಾತುಕತೆ ನಡೆಸಲಾಗಿದೆ. ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ರಾಜ್ಯ ಸರ್ಕಾರಕ್ಕೆ ಒದಗಿಸಲು ಮನವಿ ಮಾಡಲಾಗಿದ್ದು, ಅವರು ಅದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
No comments:
Post a Comment