ಹಿಂದೆ ಬ್ರಿಟೀಷರು ಧರ್ಮ, ಜಾತಿಗಳನ್ನು ಒಡೆದು ನಮ್ಮೊಳಗೆ ಜಗಳ ಹಚ್ಚಿ ಆಡಳಿತ ನಡೆಸುತ್ತಿದ್ದರು. ಇದೀಗ ಪ್ರಜಾ ಪ್ರುತ್ವದಲ್ಲಿ ನಾವೇ ಆಯ್ಕೆ ಮಾಡಿರುವ ಸರ್ಕಾರ ಆ ಕೆಲಸ ಮಾಡುತ್ತಿದೆಯೇ? ಎಂಬ ಅನುಮಾನ ಬರುತ್ತಿದೆ. ಇನ್ನೇನು ಇದೇ ಸೆಪ್ಟೆಂಬರ್ ೨೨ರಿಂದ ಜಾತಿ ಗಣತಿ ಆರಂಭವಾಗಲಿದ್ದು, ಧರ್ಮ ವಿಭಜಿಸುವುದರೊಂದಿಗೆ ಪ್ರತಿಯೊಂದು ಜಾತಿಯೊಂದಿಗೆ ಕ್ರಿಶ್ಚಿಯನ್ ಪದ ಅಂಟಿಸಿರುವ ಮತ್ತು ಉಪಜಾತಿಗಳನ್ನು ವಿಂಗಡಿಸಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರವು ಜಾತಿ ಗಣತಿಗೆ ಜಾತಿ-ಉಪಜಾತಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ ಬರೋಬ್ಬರಿ ೧೫೬೧ ಕ್ಕೂ ಹೆಚ್ಚು ಜಾತಿಗಳು ಇದೆ ಎಂದು ಸರ್ಕಾರವೇ ಅಧಿಕೃತ ಮಾಹಿತಿ ನೀಡಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಕೊಂಡಿದೆ. ೨೦೧೫ರಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ಅವರು ವರದಿ ಸಲ್ಲಿಸಿದ್ದರು. ಕಾಂತರಾಜ್ ವರದಿ ಸಲ್ಲಿಸಿ ೧೦ ವರ್ಷಗಳ ನಂತರ ಹೊಸ ಸಮೀಕ್ಷೆಗೆ ತೀರ್ಮಾನ ಮಾಡಿ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಕೆಲಸವನ್ನು ವಹಿಸಲಾಗಿದೆ. ಆದರೆ, ಪ್ರತಿಯೊಂದು ಜಾತಿಯೊಂದಿಗೆ ಕ್ರಿಶ್ಚಿಯನ್ ಪದ ಅಂಟಿಸಿರುವುದು ಮತ್ತು ಉಪಜಾತಿಗಳನ್ನು ಗುರುತಿಸುವ ಮೂಲಕ ಸರ್ಕಾರ ಜಾತಿ ವಿಭಜನೆ ಮಾಡಲು ಹೊರಟಿದೆ ಎಂಬುದು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಆರೋಪವಾಗಿದೆ.
ರಾಜ್ಯದಲ್ಲಿ ವೀರಶೈವ-ಲಿಂಗಾಯತ ಮತ್ತು ಒಕ್ಕಲಿಗರೇ ಜನಸಂಖ್ಯೆ ಮತ್ತು ರಾಜಕೀಯವಾಗಿಯೂ ಪ್ರಬಲರೆಂದು ಮೊದಲಿಂದಲೂ ತಿಳಿದಿರುವ ಸಂಗತಿ. ಆದರೆ, ಕಾಂತರಾಜ ಹಿಂದುಳಿದ ಶಾಶ್ವತ ಆಯೋಗ ಕಳೆದ ದಶಕದಲ್ಲಿ ನೀಡಿರುವ ವರದಿಯಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಿಗೆ ತೋರಿಸಿ, ವೀರಶೈವ-ಲಿಂಗಾಯತ ಮತ್ತು ಒಕ್ಕಲಿಗರ ಸಂಖ್ಯೆಯನ್ನು ಎರಡು ಮತ್ತು ಮೂರನೇ ಸ್ಥಾನಕ್ಕೆ ಇಳಿಸಿದ್ದು, ಇದು ಉದ್ದೇಶಪೂರ್ವಕವಾಗಿ ತಮ್ಮ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂದು ಎರಡೂ ಕೋಮಿನವರು ಕಾಂತರಾಜ್ ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಹೊಸ ಮೀಕ್ಷೆಗೆ ಸರ್ಕಾರ ಆದೇಶಿಸಿದೆ. ಹಿಂದಿನ ಸಮೀಕ್ಷೆಗೆ ಸುಮಾರು ೧೪೬ ಕೋಟಿಗಳಷ್ಟು ಖರ್ಚು ಮಾಡಿರುವ ಸರ್ಕಾರ ಈಗ ಮತ್ತೆ ಜಾತಿ ಗಣತಿಗೆ ೪೨೦ ಕೋಟಿ ರೂಗಳಷ್ಟು ಖರ್ಚು ಮಾಡುತ್ತಿದೆಯಂತೆ! ಇದೆಲ್ಲ ಯಾರ ಉದ್ಧಾರಕ್ಕಾಗಿ?
ವಿಭಜನೆ ತಂತ್ರವೇ?
ಸಮೀಕ್ಷೆಯ ಮೂಲಕ ಜಾತಿ-ಉಪಜಾತಿಗಳನ್ನು ವಿಂಗಡಿಸಲು ಹೊರಟಿದೆಯೇ? ಅಥವಾ ಪ್ರಬಲ ಜಾತಿಗಳನ್ನು ವಿಂಗಡಿಸುವ ಮೂಲಕ ಅವರ ರಾಜಕೀಯ ಮತ್ತು ಸಮಾಜಿಕ ಶಕ್ತಿಯನ್ನು ಕುಗ್ಗಿಸಲು ಹೊರಟಿದೆಯೇ? ಕಳೆದ ಬಾರಿ ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂದು ಒಂದೇ ಜಾತಿಯಲ್ಲಿ ಒಡಕು ಹುಟ್ಟಿಸುವ ಕೆಲಸ ವ್ಯವಸ್ಥಿತವಗಿ ನಡೆದಿದ್ದು, ಇದೀಗ ಮತ್ತೆ ಅದರಲ್ಲೇ ಹಲವು ಉಪಜಾತಿಗಳನ್ನು ವಿಭಜಿಸುವ ಮೂಲಕ ನಮ್ಮ ಸಮಾಜದಲ್ಲಿ ಒಡೆದು ಸರ್ಕಾರವೇ ಛಿದ್ರ ಛಿದ್ರಗೊಳಿಸಲು ಹೊರಟಿದೆ ಎಂಬುದು ಆಡಳಿತ ಪಕ್ಷದ ಸಚಿವರುಗಳ ವಿರೋಧ ಮತ್ತು ಇದನ್ನು ಗುರುವಾರ ನಡೆದ ಸಚಿವ ಸಂಪುಟದಲ್ಲಿ ನೇರವಾಗಿ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಈಗ ರಾಜ್ಯ ಕಾಂಗ್ರೆಸ್ನಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ.
ಈಗಾಗಲೇ ಲಮಾಣಿ ಸಮುದಾಯದವರು ರಾಜ್ಯ ಮಟ್ಟದಲ್ಲಿ ಮ್ಮ ಜಾತಿಯೊಂದಿಗೆ ಕ್ರಿಶ್ಚಿಯನ್ ಸೇರ್ಪಡೆ ಸ್ಪೃಶ್ಯ-ಅಸ್ಪೃಶ್ಯ ಎಂದು ವಿಭಜಿಸಿರುವದನ್ನು ವಿರೋಧಿಸಿ ಪ್ರತಿ ಜಿಲ್ಲೆಗಳಿಂದ ರಾಜ್ಯ ಮಟ್ಟದಲ್ಲಿ ದೊಡ್ಡ ಪ್ರಮಣದಲ್ಲಿ ಪ್ರತಿಭಟನೆಗಳನ್ನು ನಡೆಸಿ, ಅದನ್ನು ಕೈಬಿಡಬೇಕೆಂದು ಆಗ್ರಹಿತು. ಇದರೊಂದಿಗೆ ಬ್ರಾಹ್ಮಣ ಸಮಾಜವೂ ಕೂಡ ತಮ್ಮ ಬ್ರಾಹ್ಮಣ ಸಮಾಜವೆಂದರೆ ಒಂದೇ ಇದ್ದು, ಅದರಲ್ಲೂ ಉಪಜಾತಿಗಳನ್ನು ವಿಂಗಡಿಸಿ, ಅದರೊಂದಿಗೆ ಕ್ರಿಶ್ಚಿಯನ್ ಪದ ಅಂಟಿಸಿರುವುದನ್ನು ವಿರೋಧಿಸಿ ಅದನ್ನು ಕೈಬಿಡುವಂತೆ ಸಿಎಂ ಮತ್ತು ಆಯೋಗಕ್ಕೆ ಮನವಿ ಸಲ್ಲಿಸಿಯಾಗಿದೆ. ಇದೀಗ ವೀರಶೈವ ಮತ್ತು ಲಿಂಗಾಯತರೊAದಿಗೂ ಕ್ರಿಶ್ಚಿಯನ್ ಬಳಕೆ ಮತ್ತು ಉಪಜಾತಿಗಳನ್ನು ವಿಭಜಿಸಿ ಅವುಗಳಿಗೂ ಕ್ರಿಶ್ಚಿಯನ್ ಪದ ಅಂಟಿಸಿರುವುದನ್ನು ರಾಜ್ಯ ಸಚಿವ ಸಂಪುಟದಲ್ಲಿರುವ ಈ ಸಮಾಜದ ಸಚಿವರುಗಳು ಸಂಪುಟ ಸಭೆಯಲ್ಲೇ ವಿರೋಧಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ದಲಿತರೂ ಕೂಡ ತಮ್ಮ ಸಮಾಜದೊಂದಿಗೆ ಕ್ರಿಶ್ಚಿಯನ್ ಪದ ಅಂಟಿಸಿರುವುದನ್ನು ವಿರೋದಿಸಿದ್ದಾರೆ.
ಬ್ರಾಹ್ಮಣ-ಲಿಂಗಾಯ್ತರಿಗೆಲ್ಲಿದೆ ಮೀಸಲಾತಿ?
ದೇಶದಲ್ಲಾಗಲಿ, ನಮ್ಮ ರಾಜ್ಯದಲ್ಲೇ ಆಗಲಿ, ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಧರ್ಮಗಳಿಗೆ ಮತಾಂತರವಾಗಿರುವುದು ಸಾಮಾನ್ಯ. ಅವರಾರೂ ತಮ್ಮ ಮೂಲ ಜಾತಿಯೊಂದಿಗೆ ಗುರುತಿಸಿಕೊಂಡವರಲ್ಲ. ಯಾವ ಧರ್ಮಕ್ಕೆ ಮತಾಂತರವಾಗಿದ್ದಾರೋ ಅದರೊಂದಿಗೆ ಮಾತ್ರ ಗುರುತಿಸಿಕೊಂಡಿದ್ದಾರೆ. ಅನೇಕರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊAಡರೂ ದಲಿತರ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂಬ ಆರೋಪಗಳಿವೆ. ಅದನ್ನು ಕಡಿತಗೊಳಿಸಲು ಈ ಪದಬಳಕೆ ಮಡಲಾಗಿದೆ ಎಂಬ ಸಮರ್ಥನೆ ಇದೆ. ಆದರೆ, ಬ್ರಾಹ್ಮಣ, ವೀರಶೈವ, ಲಿಂಗಾಯತರಿಗೆ ಸರ್ಕಾರ ಯಾವ ಮೀಸಲಾತಿ ನೀಡುತ್ತಿದೆ? ಅವರು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊAಡು ಯಾವುದೇ ಮೀಸಲಾತಿ ಸೌಲಭ್ಯ ಪಡೆಯಲು ಹೇಗೆ ಸಾಧ್ಯ? ಉದ್ದೇಶಪೂರ್ವಕವಾಗಿ ಸಮಾಜವನ್ನು ಒಡೆಯುವ ಕೆಲಸ ಸರ್ಕಾರದಿಂದಲೇ ನಡೆದಿದೆ ಎಂಬುದು ಸಚಿವರುಗಳ ವಾದವಾಗಿದೆ. ಈಗಾಗಲೇ ಬಿಜೆಪಿ ಮುಖಂಡರೂ ಕೂಡ ಸರ್ಕಾರದ ಈ ನಡೆಯನ್ನು ವಿರೋಧಿಸಿ, ಹಿಂದೂ ಧರ್ಮವನ್ನೇ ಒಡೆದು ಛಿದ್ರ ಛಿದ್ರ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕೆ ನಾವು ಅವಕಾಶ ಕೊಡುವದಿಲ್ಲ ಎಂದು ಈ ರೀತಿಯ ಜಾತಿಗಣತಿಗೆ ತಡೆ ನೀಡುವಂತೆ ಆಗ್ರಹಿಸಿ ಬಿಜೆಪಿ ಮುಖಂಡರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಈ ವಿಷಯದಲ್ಲಿ ರಾಜ್ಯಪಾಲರು ತುರ್ತಾಗಿ ಮಧ್ಯಪ್ರವೇಶಿಸಿ, ನಿಮ್ಮ ಸಾಂವಿಧಾನಿಕ ಅಧಿಕಾರ ಬಳಸಿ ಈ ಹಂತದಲ್ಲಿ ಈ ದೋಷಪೂರಿತ ಮತ್ತು ವಿಭಜಕ ಕಾರ್ಯವನ್ನು ಮುಂದುವರಿಸದAತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಬೇಕೆಂದು ಬಿಜೆಪಿ ನಿಯೋಗ ಒತ್ತಾಯಿಸಿದೆ.
ಜಾತಿ ಗಣತಿಯ ಪಿತಾಮಹರು
ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ೧೮೮೧ -೧೯೩೧ರ ನಡುವೆ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ಮಾಡಲಾಗುತ್ತಿತ್ತು. ಅದರಲ್ಲಿ ಜನರ ಜಾತಿ, ಧರ್ಮ, ವೃತ್ತಿ ಮುಂತಾದ ವಿವರಗಳನ್ನು ದಾಖಲಿಸಲಾಗುತ್ತಿತ್ತು. ಬ್ರಿಟಿಷರು ಭಾರತೀಯ ಸಮಾಜದ ಸಂಕೀರ್ಣ ಸ್ವರೂಪವನ್ನು ಅರಿಯುವುದಕ್ಕಾಗಿ ಜಾತಿಗಣತಿ ಮಾಡುತ್ತಿದ್ದರು. ಈ ಮೂಲಕ ಜಾತಿ-ಧರ್ಮಗಳ ಪ್ರಬಲತೆ ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಗಮನಿಸಿ ಅವರಿಗೆ ಒಂದಷ್ಟು ಅಧಿಕಾರ ನೀಡುವ ಮೂಲಕ ತಮ್ಮ ಆಡಳಿತ ಸುರಳೀತವಾಗಿ ನಡೆಯುವಂತೆ ಈ ವ್ಯವಸ್ಥೆ ಜಾರಿಗೆ ತಂದಿದ್ದರೆನ್ನಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಡೆದ ಮೊದಲ ಜನಗಣತಿಯ ವೇಳೆ (೧೯೫೧ರಲ್ಲಿ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆ ಹೊರತುಪಡಿಸಿ, ಅವರಿಗೆ ಸೌಲಭ್ಯಗಳನ್ನು ನೀಡಲು ಇತರೆ ಹಿಂದುಳಿದ ಜಾತಿಗಳ (ಒಬಿಸಿ) ಜಾತಿ, ವೃತ್ತಿ ಇತ್ಯಾದಿ ವಿವರಗಳನ್ನು ಜನಗಣತಿಯಲ್ಲಿ ನಮೂದಿಸದೇ ಇರಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು.
ಆದರೆ, ಎಸ್ಸಿ, ಎಸ್ಟಿ ಹೊರತುಪಡಿಸಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಇತರೆ ವರ್ಗಗಳ (ಒಬಿಸಿ) ಜನರಿಗೆ ಸರ್ಕಾರದ ಯೋಜನೆಗಳ ಫಲ ದಕ್ಕುವಂತೆ ಮಾಡುವ ದಿಸೆಯಲ್ಲಿ ಅಗತ್ಯವೆನಿಸಿದರೆ, ರಾಜ್ಯಗಳೇ ಒಬಿಸಿ ಗಣತಿ ಮಾಡಿಸಿ, ರಾಜ್ಯವಾರು ಒಬಿಸಿ ಪಟ್ಟಿ ತಯಾರಿಸಿಕೊಳ್ಳಬಹುದು ಎಂದು ೧೯೬೧ರಲ್ಲಿ ಸೂಚಿಸಿತ್ತು. ಆಗ ಒಬಿಸಿಗೆ ಮೀಸಲಾತಿ ಸೌಲಭ್ಯ ಇರಲಿಲ್ಲ. ಭಾರತದಲ್ಲಿ ವಿವಿಧ ಸಮುದಾಯಗಳ ಜಾತಿವಾರು ಜನಸಂಖ್ಯೆಯೂ ಸೇರಿದಂತೆ ಇತರೆ ವಿವರಗಳು ಬೇಕು ಎಂದರೆ, ಲಭ್ಯವಿರುವುದು ೧೯೩೧ರ ಮಾಹಿತಿಯೇ ಮೂಲ. ಅದರ ನಂತರ ೧೯೪೧ರಲ್ಲಿಯೂ ಯುದ್ಧದ ಸಂದರ್ಭದಲ್ಲಿ ಮಾಹಿತಿ ಸಂಗ್ರಹಿಸಲಾಯಿತಾದರೂ ಅದರ ವರದಿ ಬಿಡುಗಡೆಯಾಗಿಲ್ಲ. ೨೦೧೧ರ ಜನಗಣತಿ ವೇಳೆ ಜಾತಿ ವಿವರಗಳನ್ನು ಸಂಗ್ರಹಿಸಲಾಯಿತಾದರೂ, ನಂತರದಲ್ಲಿ ಜನಸಂಖ್ಯೆಯ ಮಾಹಿತಿ ಇರುವ ವರದಿ ಮಾತ್ರ ಬಿಡುಗಡೆಯಾಗಿತ್ತು.
೨೦೧೧ರಲ್ಲಿ ನಡೆದಿತ್ತು ಪ್ರಯತ್ನ
ಜಾತಿಗಣತಿ ನಡೆಸಬೇಕು ಎಂಬ ಕೂಗು ದೇಶದಲ್ಲಿ ದಶಕಗಳಿಂದ ಕೇಳಿಬಂದಿತ್ತು. ೨೦೧೦ರಲ್ಲಿ ಇತರ ಹಿಂದುಳಿದ ವರ್ಗಗಳ ಮುಖಂಡರು ಅಂದಿನ ಯುಪಿಎ ಸರ್ಕಾರದ ಮೇಲೆ ಈ ಕುರಿತು ಒತ್ತಡವನ್ನೂ ತಂದಿದ್ದರು. ಆ ಬಳಿಕ, ೨೦೧೧ರ ಜನಗಣತಿಯ ಭಾಗವಾಗಿ ಜಾತಿಗಣತಿಯನ್ನೂ ನಡೆಸಬೇಕು ಎಂದು ಸಂಸತ್ತಿನ ಎರಡೂ ಸದನಗಳಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಅದರಂತೆ ೨೦೧೧ರ ಜನಗಣತಿಯೊಂದಿಗೆ ಸಾಮಾಜಿಕ-ಆರ್ಥಿಕ ಮತ್ತು ಜಾತಿಗಣತಿಯನ್ನೂ ನಡೆಸಲಾಗಿತ್ತು. ಆದರೆ, ಸರ್ಕಾರ ಜನಗಣತಿಯ ವಿವರಗಳನ್ನು ಮಾತ್ರ ಬಹಿರಂಗಪಡಿಸಿತ್ತು. ಜಾತಿಗಣತಿ ಪ್ರಕ್ರಿಯೆ, ಮಾಹಿತಿ ಸಂಗ್ರಹ ವೈಜ್ಞಾನಿಕವಾಗಿರಲಿಲ್ಲ. ಸಂಗ್ರಹಿಸಿದ್ದ ಮಾಹಿತಿ ಅಪೂರ್ಣವಾಗಿತ್ತು ಎಂದು ಕೇಂದ್ರ ಸರ್ಕಾರವೇ ಹೇಳಿತ್ತು. ಗ್ರಾಮೀಣ ಭಾಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ನಗರ ಪ್ರದಶಗಳಲ್ಲಿ ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯಗಳು ಜಾತಿಗಣತಿ ಮಾಡಿದ್ದವು. ಈ ಗಣತಿಯ ವರದಿಯನ್ನು ಬಿಡುಗಡೆ ಮಾಡುವಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ನಿರಂತರ ಒತ್ತಾಯಿಸುತ್ತಲೇ ಬಂದಿದ್ದವು. ಸರ್ಕಾರ ಬಿಡುಗಡೆ ಮಾಡದೇ ಇದ್ದುದರಿಂದ ವಿರೋಧ ಪಕ್ಷಗಳ ಟೀಕೆಗೂ ಗುರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಸ್ತುತ ರಾಜ್ಯ ಒಳಮೀಸಲಾತಿ ಮೀಸಲಾತಿ ಕುರಿತಂತೆ ಸರ್ಕಾರ ಸಮರ್ಪಕ ಹಾಗೂ ಸರ್ವಸಮ್ಮ ನಿಲುವನ್ನು ತಳೆಯದಿರುವುದು ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದರೆ, ಇದೀಗ ಜಾತಿ ಗಣತಿಯ ಬಗ್ಗೆಯೂ ವಿವಾದ ಮೈಮೇಲೆಳೆದುಕೊಂಡಿದೆ. ಜಾತಿ ಗಣತಿಯ ಬಗ್ಗೆ ರಾಜ್ಯದ ಎಲ್ಲ ಸಮುದಾಯದವರೂ ವಿರೋಧ ವ್ಯಕ್ತಪಡಿಸುತ್ತಿದ್ದು, ಎರಡು ವರ್ಷಗಳಿಂದ ಯಾವುದೇ ನೇಮಕಾತಿ ಮಾಡದಿದ್ದರೂ, ಜಾತಿ ಗಣತಿ ಹೆಸರಿನಲ್ಲಿ ಸಮಾಜ ವಿಭಜನೆಗೆ ಮುಂದಾಗುವ ಮೂಲಕ ಇಡೀ ರಾಜ್ಯದ ಎಲ್ಲ ಸಮುದಾಯಗಳ ವಿರೋಧ ಕಟ್ಟಿಕೊಂಡು ಇದೀಗ ಜಾತಿ ಗಣತಿ ನಡೆಯುವುದೇ ಅನುಮಾನ ಎಂಬ ಸ್ಥಿತಿ ನಿರ್ಮಾಣವಾಗಿದೆ.
-ಎಸ್.ಆರ್. ಮಣೂರ. ಪತ್ರಕರ್ತರು ಕಲಬುರಗಿ
ರಾಜ್ಯದ ಜನತೆಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ನಿಖರ ಮಾಹಿತಿ ಸಂಗ್ರಹಿಸಲು ಜಾತಿ ಗಣತಿ ನಡೆಸುತ್ತಿರುವುದಾಗಿ ಸರ್ಕಾರ ಹೇಳಿಕೊಂಡಿದೆ. ಹಿಂದುಳಿದ ವರ್ಗಗಳ ಆಯೋಗದ ಈ ಗಣತಿಯಲ್ಲಿ ಕ್ರಿಶ್ಚಿಯನ್ ವೀರಶೈವ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಬ್ರಾಹ್ಮಣ, ಕ್ರ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಜಂಗಮ, ಕ್ರಿಶ್ಚಿಯನ್ ಬೇಡ ಜಂಗಮ, ಕ್ರಿಶ್ಚಿಯನ್ ಮೊಗವೀರ, ಕ್ರಿಶ್ಚಿಯನ್ ಕೋಲಿ, ಕ್ರಿಶ್ಚಿಯನ್ ರೆಡ್ಡಿ, ಕ್ರಿಶ್ಚಿಯನ್ ದಲಿತ, ಕ್ರಿಶ್ಚಿಯನ್ ಲಮಾಣಿ, ಕೊರಮ, ಕೊರಚ, ಆದಿ ಕರ್ನಾಟಕ, ಆದಿ ಆಂಧ್ರ ಮುಂತಾದ ಸುಮಾರು ಸಾವಿರದಷ್ಟು ಜಾತಿಗಳೊಂದಿಗೆ ಕ್ರಿಶ್ಚಿಯನ್ ಪದ ಅಂಟಿಸಿದ್ದೇಕೆ? ಜಾತಿ ಗಣತಿ ನಡೆಯುತ್ತಿರುವುದು ಇತರ ಹಿಂದುಳಿದವರದ್ದೋ ಅಥವಾ ಕ್ರಿಶ್ಚಿಯನ್ನರದ್ದೋ? ಜಾತಿ ಉಪಜಾತಿಗಳ ಪಟ್ಟಿಯಲ್ಲಿ ಸರ್ಕಾರ ಸುಮಾರು ೧೫೬೧ ಜಾತಿಗಳನ್ನು ಗುರುತಿಸಿದೆಯಂತೆ! ಅಷ್ಟಾಗಿಯೂ ಮೀಸಲಾತಿಯಲ್ಲಿ ಸೇರ್ಪಡೆಗೆ ಆಗ್ರಹಿಸುವವರೆಲ್ಲರೂ ಸರ್ಕಾರಿ ಉದ್ಯೋಗ ಉದ್ದೇಶದಿಂದ. ಹಲವು ವರ್ಷಗಳಿಂದ ಸರ್ಕಾರ ಎಲ್ಲ ನೇಮಕಾತಿಗಳನ್ನೇ ಸ್ಥಗಿತಗೊಳಿಸಿರುವಾಗ ನೇಮಕಾತಿ ಕೇವಲ ಗಗನ ಕುಸುಮ ಅಲ್ಲವೇ? ಸಾಮಾಜಿಕ ಸ್ಥಿತಿಗತಿಗಳನ್ನು ಅರಿತು ಸರ್ಕಾರ ಅಂಥ ಯಾವ ಯೋಜನೆಗಳನ್ನು ತರಬಯಸಿದೆ? ಈಗಿರುವ ಯೋಜನೆಗಳೇ ಜನರಿಗೆ ತಲುಪಿಸಲು ಸಾಧ್ಯವಾಗದಿರುವಾಗ ಹೊಸ ಯೋಜನೆಗಳು ಬೇಕೇ?